ಹುಕ್ಕೇರಿ: ರಾಜ್ಯದಲ್ಲಿ ಮತ್ತೆ ವರುಣನ ಅಬ್ಬರ ಶುರುವಾಗಿದ್ದು, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡು ಪರದಾಡುವಂತಾಗಿದೆ.
ನಿನ್ನೆ ಶನಿವಾರ ದಿ.10 ರಂದು ಮಧ್ಯಾಹ್ನ ತಾಲೂಕಿನ ಸುತ್ತಮುತ್ತ ಹಳ್ಳಿಗಳಲ್ಲಿ ಧಾರಾಕಾರವಾಗಿ ಸುರಿದ ಮಳೆಯ ನೀರು ಇನ್ನೂ ಹರಿಯುತ್ತಿರುವಾಗ ಇಂದು ಮತ್ತೆ ಸಾಯಂಕಾಲ ಭಾರಿ ದೊಡ್ಡ ಮಟ್ಟದಲ್ಲಿ ಮಳೆ ಸುರಿದ ಪರಿಣಾಮ ಹುಕ್ಕೇರಿ ಪಟ್ಟಣದ ಜನತೆ ನಲುಗಿ ಹೋಗಿದೆ. ನೀರು ರಸ್ತೆಯಲ್ಲಿ ಪ್ರವಾಹದಂತೆ ಹರಿದು ಬರುತ್ತಿರುವಾಗ ನೀರಿನ ಸೆಳೆತಕ್ಕೆ ಸಿಕ್ಕ ಒಬ್ಬ ಕೊಚ್ಚಿ ಹೋಗಿದ್ದಾನೆ. ರಸ್ತೆಯಲ್ಲಿ ಸಂಚರಿಸುವ ಕಾರು, ದ್ವಿಚಕ್ರ ವಾಹನಗಳು ಮುಳುಗಡೆಯಾಗಿ ಕೆಲ ವಾಹನಗಳು ನೀರಿನಲ್ಲಿ ತೇಲಿಕೊಂಡು ಹೋದವು.
ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ತಾಲೂಕಿನ ಮದಮಕ್ಕನಾಳ, ಬಸ್ತವಾಡ, ಮದಿಹಳ್ಳಿ ಸೇರಿದಂತೆ ಕೆಲವು ಗ್ರಾಮಗಳಲ್ಲಿನ ರಸ್ತೆ ಸಂಚಾರ ಸಂಪೂರ್ಣ ಬಂದಾಗಿದೆ. ಹಾಗೂ ಹಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ಜನರು ಆತಂಕದಲ್ಲೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ.