ಬೆಳಗಾವಿ: ಕೋವಿಡ್–19 ನಿರ್ವಹಣೆಗೆ ಬಿಡುಗಡೆಯಾದ ಅನುದಾನ ದುರ್ಬಳಕೆ ಬಗ್ಗೆ ಆರೋಪಗಳು ಕೇಳಿಬಂದಿರುವುದರಿಂದಾಗಿ ಜಿಲ್ಲೆಯ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಗುರುವಾರಅಮಾನತುಗೊಳಿಸಲಾಗಿದೆ.
‘ಈ ಅಧಿಕಾರಿಯ ಹುದ್ದೆಯ ಮೇಲಿನ ಹಕ್ಕನ್ನು (ಲೀನ್) ಬೆಂಗಳೂರು ನಗರ ಜಿಲ್ಲೆಯ ಚುನಾವಣಾ ತಹಶೀಲ್ದಾರ್ ಸ್ಥಾನಕ್ಕೆ ಬದಲಾಯಿಸಲಾಗಿದೆ. ಅವರು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ. ನಿಯಮ ಪ್ರಕಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ’ ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆರ್. ಉಮಾದೇವಿ ಆದೇಶದಲ್ಲಿ ತಿಳಿಸಿದ್ದಾರೆ.
‘ಈ ಅಧಿಕಾರಿಯು ಕೋವಿಡ್–19 ನಿರ್ವಹಣೆ ಅನುದಾನವನ್ನು ಕಾರ್ಯಪಡೆ ಸಮಿತಿಯ ಅನುಮೋದನೆ ಪಡೆಯದೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕುಡಚಿಯ ಬಿಜೆಪಿ ಶಾಸಕ ಪಿ. ರಾಜೀವ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿದ್ದರು. ಈ ಕಾರಣದಿಂದ ಮಾಡಲಾದ ಖರ್ಚು–ವೆಚ್ಚದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೆ.22ರಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸಲಾಗಿತ್ತು. ಸಮಿತಿಯು ಸಲ್ಲಿಸಿದ್ದ ವರದಿ ಆಧರಿಸಿ, ಬಿಡುಗಡೆಯಾದ ಅನುದಾನದ ಕುರಿತ ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಮನಸೋಇಚ್ಛೆ ಖರ್ಚು ಮಾಡಿ ಕರ್ತವ್ಯ ಲೋಪ ಎಸಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಹೀಗಾಗಿ, ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬಹುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
‘ಈ ಹಿನ್ನೆಲೆಯಲ್ಲಿ ಅವರು ಅಲ್ಲಿ ತಹಶೀಲ್ದಾರ್ ಆಗಿ ಮುಂದುವರಿದಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತಿದ್ದುವ ಅಥವಾ ನಾಶಪಡಿಸುವ ಸಾಧ್ಯತೆ ಇರುವುದರಿಂದ ಮತ್ತು ಆರೋಪ ಗಂಭೀರ ಸ್ವರೂಪದ್ದಾಗಿರುವುದರಿಂದ ಅಮಾನತು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
(ಇ ಹಿಂದೆ ಕುಡಾ ಬೆಳಗಾವಿ ಟೈಮ್ಸ ಕೋವಿಡ-19 ಅಕ್ರಮದ ಬಗ್ಗೆ ಸವಿಸ್ತಾರವಾಗಿ ವರದಿ ಮಾಡಿತ್ತು)