*ವಿಶಿಷ್ಟ ಪ್ರಣಾಳಿಕೆ ಮೂಲಕ ಗಮನ ಸೆಳೆದಿದ್ದ ಗಂಗಮ್ಮಗೆ ಸೋಲು: ಎದುರಾಳಿಗಳು, ಗ್ರಾಮಸ್ಥರಲ್ಲಿ ನಡುಕ*

Share The News

ತುಮಕೂರು, ಡಿಸೆಂಬರ್ 30: ತುಮಕೂರು ಜಿಲ್ಲೆಯ ಕಲ್ಕೆರೆ ಗ್ರಾಮ ಪಂಚಾಯಿತಿ ಚುನಾವಣೆಗೆ ವಿಶಿಷ್ಟ ಪ್ರಣಾಳಿಕೆ ಮೂಲಕ ಗಮನ ಸೆಳೆದು ಸ್ಪರ್ಧಿಸಿದ್ದ ಗಂಗಮ್ಮ ಎಂಬ ಅಭ್ಯರ್ಥಿ ಸೋತಿದ್ದಾರೆ.

ಚುನಾವಣೆಗೂ ಮುನ್ನ ಗಂಗಮ್ಮ ನೀಡಿದ್ದ ಭರವಸೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅದರಲ್ಲೂ ಗಂಗಮ್ಮ ಗೆದ್ದರೆ ಮಾಡುವ ಕೆಲಸಗಳಿಗಿಂತ ಸೋತರೆ ಮಾಡುವ ಕೆಲಸಗಳೇ ಪಟ್ಟಿಯೇ ಆಶ್ಚರ್ಯವನ್ನುಂಟು ಮಾಡುವಂತಿತ್ತು. ಈಗ ಅಭ್ಯರ್ಥಿ ಗಂಗಮ್ಮ ಸೋತಿದ್ದು, ಅವರಿಗೆ ಕಲ್ಕೆರೆಯಲ್ಲಿ ಆರು, ದೊಡ್ಡಗುಣಿಯಲ್ಲಿ ಎರಡು ಮತ ಸಿಕ್ಕಿವೆ.

ಗ್ರಾ. ಪಂ ಚುನಾವಣೆ; ವೈರಲ್ ಆದ ಗಂಗಮ್ಮ ನೀಡಿದ ಭರವಸೆಗಳು!

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಭ್ಯರ್ಥಿ ಗಂಗಮ್ಮ ಅವರು ಚಪ್ಪಲಿ ಗುರುತಿನ ಚಿನ್ಹೆಗೆ ಮತ ಕೇಳಿದ್ದರು.

ತಮಗೆ ಮತ ಹಾಕಿದರೆ ಮಾಡುವ ಕೆಲಸಗಳ ಬಗ್ಗೆ ಹಾಗೂ ಮತ ಹಾಕದಿದ್ದರೆ ಮಾಡುವ ಕೆಲಸಗಳ ಕುರಿತು ಕರಪತ್ರದಲ್ಲಿ ನಮೂದಿಸಿ ವಿಶಿಷ್ಟ ಪ್ರಚಾರ ಮಾಡಿದ್ದರು.

ಒಂದು ವೇಳೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗಂಗಮ್ಮ ಗೆದ್ದಿದ್ದರೆ, ದೇವಾಲಯ ಮತ್ತು ಅರಳಿ ಕಟ್ಟೆ ಕಟ್ಟಿಸುವುದು. ರಸ್ತೆ ನಿರ್ಮಾಣ, ನೀರು ರಸ್ತೆಗೆ ಹೋಗದಂತೆ ಸಿ.ಸಿ ಚರಂಡಿ ಮಾಡಿಸುವ ಭರವಸೆ ಕೊಡಲಾಗಿತ್ತು.

ಅಭ್ಯರ್ಥಿ ಗಂಗಮ್ಮ ಚುನಾವಣೆಯಲ್ಲಿ ಸೋತರೆ, ಅನರ್ಹವಾಗಿ ಪಡೆದಿರುವ ರೇಷನ್ ಕಾರ್ಡ್ ರದ್ದು ಮಾಡುವುದು, ಸುಳ್ಳು ಮಾಹಿತಿ ಕೊಟ್ಟು 40 ಕುಟುಂಬಗಳು ಪಡೆಯುತ್ತಿರುವ ವಿವಿಧ ಯೋಜನೆಯ ಹಣ ಕಟ್ ಮಾಡಿಸುವುದು. ಮೂಲ ದಾಖಲಾತಿ ಇಲ್ಲದೆ 11 ಕುಟುಂಬಗಳು ಉತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸುವುದು ಹಾಗೂ ಹಳೇ ದಾಖಲೆಯಂತೆ ಸ್ಮಶಾನ ಮಾಡಿಸುವುದು ಎಂದು ಕರಪತ್ರದಲ್ಲಿ ತಿಳಿಸಿದ್ದರು.

ಡಿ.೩೦ ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಅಂತಿಮವಾಗಿ ಗ್ರಾಮಸ್ಥರು ಗಂಗಮ್ಮನನ್ನು ಸೋಲಿಸಿದ್ದಾರೆ. ಈಗ ಗಂಗಮ್ಮನ ಮುಂದಿನ ನಿರ್ಧಾರ ಏನು ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.


Share The News

Leave a Reply

Your email address will not be published. Required fields are marked *

error: Content is protected !!