ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದ ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ರಾಜ್ಯ ಹೈಕೋರ್ಟ್ ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.
ಇತ್ತಿಚೆಗೆ ರಾಯಚೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಗಣರಾಜ್ಯೋತ್ಸವ ವೇಳೆ ಇರಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ ತೆರವುಗೊಳಿಸುವಂತೆ ಹೇಳಿದ್ದ ಮಲ್ಲಿಕಾರ್ಜುನಗೌಡ ಅವರು, ಚಿತ್ರವನ್ನು ತೆರವುಗೊಳಿಸಿದ ನಂತರ ಧ್ವಜಾರೋಹಣ ನೆರೆವೇರಿಸಿದ್ದರು. ನ್ಯಾಯಾಧೀಶರ ಈ ನಡೆಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಶುಕ್ರವಾರದಂದು, ಆದೇಶ ಹೊರಡಿಸಿದರು ಹೈಕೋರ್ಟ್ ಮಲ್ಲಿಕಾರ್ಜುನಗೌಡ ಅವರನ್ನು ರಾಯಚೂರಿನಿಂದ , ಬೆಂಗಳೂರಿನ ಕರ್ನಾಟಕ ರಾಜ್ಯ ಟ್ರಾನ್ಸ್‌ಪೋರ್ಟ್ ಅಪಿಲಿಯೇಟ್ ಟ್ರಿಬ್ಯುನಲ್‌ಗೆ ವರ್ಗಾವಣೆಗೊಳಿಸಿ ಆದೇಶಿಸಿದೆ.
ಅವರ ಕೃತ್ಯವನ್ನು ವಿರೋಧಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನೆಗಳು ಇನ್ನೂ ಕೂಡಾ ಮುಂದುವರೆದಿದ್ದು, ಅವರನ್ನು ನ್ಯಾಯಾಧೀಶರ ಸ್ಥಾನದಿಂದ ವಜಾಗೊಳಿಸುವಂತೆ ಶನಿವಾರದಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ವತಿಯಿಂದ ವಿಧಾನ ಸೌಧ ಮತ್ತು ಹೈಕೋರ್ಟ್ ಚಲೋ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ದಲಿತ ಪ್ರಗತಿಪರ ಸಂಘಟನೆಗಳ ಚಾಮರಾಜನಗರ ಜಿಲ್ಲಾ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ ಹೇಳಿಕೆ ನೀಡಿದ್ದು, “ನ್ಯಾಯಾಧೀಶರ ವಿರುದ್ಧ ರಾಜ್ಯ ಸರಕಾರವಾಗಲೀ, ಕಾನೂನು ಸಚಿವರಾಗಲೀ, ಹೈಕೋರ್ಟ್ ನ್ಯಾಯಮೂರ್ತಿಗಳಾಗಲೀ ಕ್ರಮ ವಹಿಸದಿಲ್ಲದಿರುವುದು ದುರಂತವಾಗಿದ್ದು, ಫೆಬ್ರವರಿ 19 ರಂದು ಬೆಂಗಳೂರಿನಲ್ಲಿ ರ‍್ಯಾಲಿ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯದ ನಾನಾ ಕಡೆಯಿಂದ 1ಲಕ್ಷಕ್ಕೂ ಹೆಚ್ಚು ಮಂದಿ ಈ ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ” ಎಂದು ತಿಳಿಸಿದ್ದಾರೆ.