ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ವಿಧಾನಸೌಧ ಹಾಗೂ ಹೈಕೋರ್ಟ್ ಚಲೋದಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅವರನ್ನು ವಜಾಗೊಳಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಲಾಯಿತು.
ರಾಯಚೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನಗೌಡ ಅವರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋವನ್ನು ಗಣರಾಜ್ಯೋತ್ಸವ ದಿನದಂದು ತೆರವುಗೊಳಿಸಿ ಧ್ವಜಾರೋಹಣ ಮಾಡಿದ್ದನ್ನು ಖಂಡಿಸಿ ಬೆಂಗಳೂರಿನಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
ರಾಜ್ಯದ ಮೂಲೆ ಮೂಲೆಗಳಿಂದ ಸಾಗರೋಪಾದಿಯಲ್ಲಿ ಅಂಬೇಡ್ಕರ್ ಅನುಯಾಯಿಗಳು ಆಗಮಿಸಿದ್ದರು. ದಲಿತ ವಿದ್ಯಾರ್ಥಿ ಪರಿಷತ್, ಎಸ್ಡಿಪಿಐ, ಬಿಎಸ್ಪಿ, ಕರ್ನಾಟಕ ದಲಿತ ವಿಮೋಚನಾ ಸಮಿತಿ, ಭಾರತೀಯ ದಲಿತ ಫ್ಯಾಂಥರ್- ಹೀಗೆ ಹಲವು ಸಂಘಟನೆಗಳು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ಭಾಗವಾಗಿದ್ದವು. ನೂರಾರು ವಾಹನಗಳನ್ನು ಮಾಡಿಕೊಂಡು ದೂರದ ಜಿಲ್ಲೆಗಳಿಂದ ಸಾವಿರಾರು ಜನರು ಬೆಂಗಳೂರಿಗೆ ಆಗಮಿಸಿದ್ದರು.
ಕೇಂದ್ರ ರೈಲ್ವೆ ನಿಲ್ದಾಣದಿಂದ ಪ್ರೀಡಂ ಪಾರ್ಕ್ವರೆಗೆ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಜೈಭೀಮ್ ಘೋಷಣೆಗಳು ಮೊಳಗಿತು. ನೀಲಿ ಭಾವುಟ, ನೀಲಿ ಶಾಲುಗಳು, ನೀಲಿ ಟೋಪಿಗಳು ರಾರಾಜಿಸಿದವು. ಕಲಾವಿದರು ವಾದ್ಯ ನುಡಿಸುತ್ತ ಮೆರವಣಿಗೆಯನ್ನು ಮುನ್ನಡೆಸಿದರು. ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
“ಕೋರ್ಟ್ ಸಭಾಂಗಣದಲ್ಲಿಯೇ ಅಂಬೇಡ್ಕರ್ ಭಾವಚಿತ್ರ ಇರುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕು. ನ್ಯಾಯಾಲಯದಲ್ಲಿ ಮೀಸಲಾತಿ ಕಡ್ಡಾಯ ಮಾಡಬೇಕು. ಹುಮನಾಬಾದ್ ತಹಸೀಲ್ದಾರ್ ವಿರುದ್ಧವೂ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಲಾಯಿತು.
ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, “ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಅವಮಾನಿಸುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವೇ ಇದೆ. ಮಲ್ಲಿಕಾರ್ಜುನಗೌಡರ ವಿರುದ್ಧ ಸೂಕ್ತ ಕ್ರಮ ಜರುಗಿಸದಿದ್ದರೆ ಹೋರಾಟ ತೀವ್ರಗೊಳ್ಳಲಿದೆ” ಎಂದು ಎಚ್ಚರಿಸಿದರು.
ಸಿಎಂ ಸ್ಥಳಕ್ಕೆ ಭೇಟಿ: ಭರವಸೆ
ಪ್ರತಿಭಟನಾ ಸ್ಥಳಕ್ಕೆ (ಫ್ರೀಡಂ ಪಾರ್ಕ್) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿ, ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಹೋರಾಟಗಾರರ ಮನವಿ ಪತ್ರವನ್ನು ಸಿಎಂ ಸ್ವೀಕರಿಸಿದರು. ಜೊತೆಗೆ ಮಲ್ಲಿಕಾರ್ಜುನ ಗೌಡ ಅವರ ನಡೆಯನ್ನು ಖಂಡಿಸಿದರು.
ಅಂಬೇಡ್ಕರ್ ಫೋಟೋ ತೆರವು ಮಾಡಿಸಿ ಅವಮಾನ ಮಾಡಿದ ಘಟನೆಯು ನಮಗೂ ಕಣ್ಣು ತೆರೆಸಿದೆ. ಘಟನೆ ಸಂಬಂಧ ದಲಿತ ಸಮುದಾಯಗಳ ಮುಖಂಡರು ನನಗೆ ವಿವರಿಸಿದ್ದಾರೆ. ಶೀಘ್ರದಲ್ಲಿಯೇ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗುವುದು” ಎಂದು ತಿಳಿಸಿದರು.
ಚಿಂತಕ ಯೋಗೇಶ್ ಮಾಸ್ಟರ್, ಹ.ರಾ.ಮಹೇಶ್, ಹರಿರಾಮ್, ಬಿ.ಆರ್.ಭಾಸ್ಕರ್ ಪ್ರಸಾದ್ ಸೇರಿದಂತೆ ಹಲವು ಮುಖಂಡರು ಹೋರಾಟದಲ್ಲಿ ಹಾಜರಿದ್ದರು.