ಘಟಪ್ರಭಾ:- ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಬೆಳಗಾವಿಗೆ ದಿ.೨೧ ಮತ್ತು ದಿ.೨೨ರಂದು ಬೆಳಗಾವಿಗೆ ಹಾಗೂ ದಿ.೨೬ರಂದು ಬೆಳಗಾವಿಯಿಂದ ಯಶವಂತಪುರಕ್ಕೆ ವಿಶೇಷ ರೈಲುಗಳನ್ನು ಬಿಡಲಾಗಿದ್ದು ಪ್ರಯಾಣಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುವುದೆಂದು ರಾಜ್ಯಸಭಾ ಸದಸ್ಯ ಹಾಗೂ ನೈರುತ್ಯ ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿರುವ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಈ ಬಗ್ಗೆ ಸಂಸದರು ಇಂದು ದೂರವಾಣಿ ಮುಖಾಂತರ ಪತ್ರಿಕೆಗೆ ಹೇಳಿಕೆ ನೀಡಿದ್ದು ಸಾವಿರಾರು ಸಂಖ್ಯೆಯಲ್ಲಿ ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರು ತಮ್ಮ ಊರುಗಳಿಗೆ ಬರುತ್ತಿದ್ದು ಖಾಸಗಿ ಬಸ್ಸುಗಳು ಇದೇ ಸಂದರ್ಭದಲ್ಲಿ ಟಿಕೇಟ್ ದರ ಹೆಚ್ಚಿಗೆ ಮಾಡಿದ್ದಾರೆ ಆದ್ದರಿಂದ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳನ್ನು ಬಿಡಲು ಪ್ರಯಾಣಿಕರು ಮನವಿ ಮಾಡಿದ್ದರಿಂದ ಈ ಬಗ್ಗೆ ಹುಬ್ಬಳಿಯ ನೈರುತ್ಯ ವಲಯದ ರೈಲ್ವೆ ಮಹಾಪ್ರಬಂಧಕರೊಂದಿಗೆ ದೂರವಾಣಿ ಕರೆ ಮಾಡಿ ಮನವಿ ಮಾಡಿದ್ದರಿಂದ ಬೆಳಗಾವಿಯಿಂದ ಯಶವಂತಪುರ ಮತ್ತು ಯಶವಂತಪುರ-ಬೆಳಗಾವಿ ನಡುವೆ ಎರಡು ದಿನದ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ರೈಲು ಬಿಡಲು ಆದೇಶಿಸಿದ್ದಾರೆ.
ಯಶವಂತಪುರ-ಬೆಳಗಾವಿ ವಿಶೇಷ ಎಕ್ಸ್ಪ್ರೆಸ್ ರೈಲು ಯಶವಂತಪುರದಿಂದ ೨೧.೧೦.೨೦೨೨ (ಶುಕ್ರವಾರ) ಮತ್ತು ೨೨.೧೦.೨೦೨೨ (ಶನಿವಾರ) ರಾತ್ರಿ ೧೧:೩೦ ಕ್ಕೆ ಹೊರಟು ಮರುದಿನ ಬೆಳಿಗ್ಗೆ ೦೯:೨೫ ಕ್ಕೆ ಬೆಳಗಾವಿಗೆ ತಲುಪುವುದು ಮತ್ತು ಬೆಳಗಾವಿಯಿಂದ ೨೨.೧೦.೨೦೨೨ (ಶನಿವಾರ) ಬೆಳಿಗ್ಗೆ ೧೧:೧೦ ಕ್ಕೆ ಹೊರಟು ಅದೇ ದಿನ ರಾತ್ರಿ ೧೦:೦೦ ಗಂಟೆಗೆ ಯಶವಂತಪುರಕ್ಕೆ ತಲುಪುವುದು. ಇದಲ್ಲದೇ ದಿನಾಂಕ ೨೬.೧೦.೨೦೨೨ ರಂದು ಬೆಳಗಾವಿ-ಯಶವಂತಪುರ ವಿಶೇಷ ಎಕ್ಸ್ಪ್ರೆಸ್ ಬೆಳಗಾವಿಯಿಂದ ರಾತ್ರಿ ೧೦:೦೦ ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ ೦೮:೫೦ಕ್ಕೆ ಯಶವಂತಪುರಕ್ಕೆ ತಲುಪುತ್ತದೆ ಎಂದು ಹೇಳಿದ್ದಾರೆ.