ಅತಿವೃಷ್ಟಿಯಾಗುತ್ತಿರುವ ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಹಾಗೂ ಧಾರವಾಡ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಡಿಯೋ ಸಂವಾದ ನಡೆಸಿ ಮುಂಜಾಗ್ರತೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. “ಯಾವುದೇ ಕಾರಣಕ್ಕೂ ಅಧಿಕಾರಿಗಳು ರಜೆ ಹಾಕಬಾರದು” ಎಂದು ಸೂಚಿಸಿರುವ ಸಿಎಂ ಯಡಿಯೂರಪ್ಪ ಅವರು, “ಅಧಿಕಾರಿಗಳು ದಿನದ 24 ಗಂಟೆಯೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಜೊತೆಗೆ ಮುಂದಿನ 48 ಗಂಟೆ ಏನು ಆಗಬಹುದು ಎಂಬುದನ್ನು ಊಹೆ ಮಾಡಿ ಕೆಲಸ ಮಾಡಬೇಕು” ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.
ಪ್ರವಾಹ ಉಂಟಾಗುವ ಸಾಧ್ಯತೆ ಇರುವ ಗ್ರಾಮಗಳನ್ನು ಸಹ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಬೇಕು” ಎಂದು ವಿಡಿಯೋ ಕಾನ್ಫರೆನ್ಸ್ನಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಯಿತು. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ತಂಡಗಳನ್ನು ಅಗತ್ಯ ಇರುವ ಜಿಲ್ಲೆಗಳಿಗೆ ತುರ್ತಾಗಿ ಕಳುಹಿಸಿ ಎಂದು ಸಭೆಯಲ್ಲಿ ಸಿಎಂ ಯಡಿಯೂರಪ್ಪ ಸೂಚಿಸಿದರು.
“ಆದಷ್ಟು ಹೆಚ್ಚು ಕಾಳಜಿ ಕೇಂದ್ರಗಳನ್ನು ತೆರದು ಸರ್ವ ಸನ್ನದ್ಧರಾಗಿರಬೇಕು. ಜೊತೆಗೆ ಹಣಕಾಸಿನ ನೆರವು ಅಗತ್ಯವಿದ್ದಲ್ಲಿ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು. ಅಗತ್ಯವಿದ್ದಲ್ಲಿ ಸೇನಾ ಹೆಲಿಕಾಪ್ಟರ್ಗಳನ್ನು ಕಾಯ್ದಿರಿಸಿಕೊಳ್ಳಿ” ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೂಚಿಸಿದರು. ಕಂದಾಯ ಸಚಿವ ಆರ್. ಅಶೋಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.