ತಪ್ಪು ಮಾಡಿಬಿಟ್ಟಿರಿ ಯಡಿಯೂರಪ್ಪನವರೇ…..
( ಮಾಧ್ಯಮದ ಮೇಲೆ ದಾಳಿ )
ಮೊದಲಿಗೆ ಮಾನ್ಯ ಯಡಿಯೂರಪ್ಪನವರಿಗೆ….
ಸೇಮ್ ಮಹಾರಾಷ್ಟ್ರದ ಅನನುಭವಿ ಉದ್ದವ್ ಠಾಕ್ರೆ ಕಂಗನಾ ರಾವುತ್ ವಿಷಯದಲ್ಲಿ ಮಾಡಿದಂತೆ…….
ವೈಯಕ್ತಿಕ ಟೀಕೆಗಳಿಗೆ ಪೋಲೀಸರ ಮೂಲಕ ರೌಡಿಸಂ ಮಾಡಿಸಿದಿರಿ………
ಅಭಿವ್ಯಕ್ತಿ ಸ್ವಾತಂತ್ರ್ಯದ ನಿಜವಾದ ಧ್ವನಿ ಮಾಧ್ಯಮ ವ್ಯವಸ್ಥೆ.
ಹೌದು, ಮಾಧ್ಯಮಗಳಲ್ಲಿ ಕೆಲಸ ಮಾಡುವವರು ಎಲ್ಲಾ ಕ್ಷೇತ್ರಗಳಂತೆ ಇಲ್ಲಿಯೂ ನೈತಿಕ ಅಧಃಪತನದತ್ತ ಸಾಗಿರುವುದು ನಿಜ. ವಿವೇಚನಾ ರಹಿತ ತೀರ್ಮಾನ, ಭ್ರಷ್ಟಾಚಾರ, ಬ್ಲಾಕ್ ಮೇಲ್ ಎಲ್ಲವೂ ಇದೆ. ಆದರೆ ಅದು ವ್ಯಕ್ತಿಗಳು ಮಾಡುವ ಅಪರಾಧ. ಅದನ್ನು ಶಿಕ್ಷಿಸಬೇಕು. ಅದಕ್ಕೆ ಸಾಕಷ್ಟು ಕಾನೂನುಗಳು ಇವೆ. ಆದರೆ ಒಂದು ವ್ಯವಸ್ಥೆಯ ಮೇಲಿನ ದಾಳಿ ಖಂಡನೀಯ……
ಯಡಿಯೂರಪ್ಪನವರ ಮಗನ ಮೇಲೆ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂಬ ಕಾರಣದಿಂದ ಆ ಚಾನಲ್ಲಿನ ಮುಖ್ಯಸ್ಥರು ಮೇಲೆ ಇನ್ನೊಬ್ಬರು ಮಾಡಿರುವ ಆರೋಪದ ಮೇಲೆ ಏಕಾಏಕಿ ದಾಳಿ ಮಾಡುವುದು, ವಾಹಿನಿಯ ನೇರ ಪ್ರಸಾರ ನಿಲ್ಲಿಸುವುದು ಸರ್ಕಾರದ ಕೆಟ್ಟ ನಡೆ.
ಅತ್ಯಾಚಾರ, ಕೊಲೆ, ದರೋಡೆ, ವಿದ್ವಂಸಕ ಕೃತ್ಯ, ಡ್ರಗ್ಸ್ ಮುಂತಾದ ಪ್ರಕರಣಗಳಲ್ಲಿ ಪೋಲೀಸರ ಈ ದಾಳಿ ಸಮರ್ಥನೀಯ. ಆದರೆ ಒಂದು ಭ್ರಷ್ಟಾಚಾರದ ಕಂಪ್ಲೇಂಟ್ ಆಧಾರದ ಮೇಲೆ ಸ್ವತಃ ಆರೋಪಿಯಾಗಿ ಮುಖ್ಯಮಂತ್ರಿಗಳ ಮಗ ಇರುವಾಗ ಇದು ಅಷ್ಟು ಒಳ್ಳೆಯ ನಡೆಯಲ್ಲ.
ಸನ್ಮಾನ್ಯ ಪೋಲೀಸ್ ಮುಖ್ಯಸ್ಥರೆ, ಸಿಸಿಬಿ ಮುಖ್ಯಸ್ಥರೆ, ಐಪಿಎಸ್ ಓದುವುದು ಮತ್ತು ಕಾರ್ಯಾಂಗದ ಬಹುದೊಡ್ಡ ಅಧಿಕಾರ ಹಿಡಿದು ಸಂಬಳ ಪಡೆಯುವುದು ರಾಜಕಾರಣಿಗಳ ಆಳುಗಳಾಗಿ ಕೆಲಸ ಮಾಡಲು ಅಲ್ಲ. ಸಂವಿಧಾನಾತ್ಮಕ ಜವಾಬ್ದಾರಿ ನಿರ್ವಹಿಸಲು. ಈ ರೀತಿಯ ಬಹಿರಂಗ ಎಡವಟ್ಟು ಮಾಡಿದರೆ ಜನರಿಗೆ ನಿಮ್ಮ ಮೇಲೆ ಇನ್ನಷ್ಟು ಅಪನಂಬಿಕೆ ಉಂಟಾಗುತ್ತದೆ. ಯಾವ ತಪ್ಪಿಗೆ ಯಾವ ರೀತಿ, ಎಷ್ಟು ಪ್ರಮಾಣದಲ್ಲಿ, ಯಾರ ಮೇಲೆ ಆಕ್ರಮಣ ಮಾಡಬೇಕು ಎಂಬುದು ನಿಮ್ಮ ವಿವೇಚನೆ ಬಿಟ್ಟದ್ದು ನಿಜ. ಆದರೆ ಇದು ಪ್ರಾಮಾಣಿವಾಗಿರಲಿ.
ನ್ಯಾಯದ ದಂಡ ಯಾವಾಗಲೂ ನೇರ ಮತ್ತು ಸಮಾನಾಂತರವಾಗಿರಲಿ…
ಮುಖ್ಯಮಂತ್ರಿಗಳು, ಅವರ ಮಕ್ಕಳು, ಸಂಬಂಧಿಕರು, ಬಾಲಂಗೋಚಿಗಳು, ಅಧಿಕಾರಿಗಳು ಭ್ರಷ್ಟಾಚಾರ ಮಾಡುವುದು ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ನಿರಂತರವಾಗಿ ನಡೆದಿದೆ. ಇದೊಂದು ಬಹಿರಂಗ ಸತ್ಯ. ಒಂದು ವೇಳೆ ಭ್ರಷ್ಟಾಚಾರದ ಆರೋಪದ ಮೇಲೆ ದಾಳಿ ಮಾಡುವುದಾದರೆ ಮೊದಲು ರಾಜ್ಯದ ಎಲ್ಲಾ ಪೋಲೀಸ್ ಸ್ಟೇಷನ್ ಗಳನ್ನು, ಜಮೀನು ನೋಂದಣಿ ಅಧಿಕಾರಿಗಳನ್ನು, ಸಾರಿಗೆ ಅಧಿಕಾರಿಗಳನ್ನು ಕೊನೆಗೆ ವಿಧಾನಸೌಧವನ್ನೇ ದಾಳಿ ಮಾಡಬೇಕಾಗುತ್ತದೆ.
ಹಾಗೆಂದು ಭ್ರಷ್ಟಾಚಾರ ಬೆಂಬಲಿಸಬೇಕಾಗಿಲ್ಲ ಅಥವಾ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಬೇಕಾಗಿಲ್ಲ. ಈಗಿನ ಇರುವ ವ್ಯವಸ್ಥೆಯಲ್ಲಿ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ವಾಹಿನಿಯೊಂದರ ಮುಖ್ಯಸ್ಥ ಭ್ರಷ್ಟಾಚಾರ ಮಾಡಿದ್ದರೆ ಬಂಧಿಸಿ. ಆದರೆ ಈಗಿನ ದಾಳಿ ನಿಜವಾದ ಉದ್ದೇಶಕ್ಕಿಂತ ಒಳ ಅರ್ಥಗಳನ್ನು ಹೊಂದಿರುವುದು ಕಂಡುಬರುತ್ತಿದೆ. ಅಲ್ಲದೆ ವಾಹಿನಿಗಳ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ. ಮಾಧ್ಯಮದಲ್ಲಿ ಒಂದಷ್ಟು ಪತ್ರಕರ್ತರು ಸರಿ ಇಲ್ಲ. ಆದರೆ ಮಾಧ್ಯಮ ವ್ಯವಸ್ಥೆ ತೀರಾ ತೀರಾ ಅವಶ್ಯಕ ಮತ್ತು ಅನಿವಾರ್ಯ. ಎಲ್ಲಾ ರೀತಿಯ ಶೋಷಿತರ ಧ್ವನಿ ಮಾಧ್ಯಮ….
ಇತರ ವಾಹಿನಗಳ ಮುಖ್ಯಸ್ಥರೆ ಮತ್ತು ಮಾಧ್ಯಮ ಮಿತ್ರರೆ ದಯವಿಟ್ಟು ಈ ಘಟನೆಯನ್ನು ಒಕ್ಕೊರಲಿನಿಂದ ಪ್ರತಿಭಟಿಸಿ. ದಾಳಿಯ ರೀತಿ ಮತ್ತು ಸಮಯವನ್ನು ಖಂಡಿಸಬೇಕೆ ಹೊರತು ಭ್ರಷ್ಟಾಚಾರ ನಿಗ್ರಹವನ್ನಲ್ಲ. ಇತರ ದಾಳಿಯ ಬಗ್ಗೆ ಬ್ರೇಕಿಂಗ್ ನ್ಯೂಸ್ ಮಾಡಿ ಬಾಯಿ ಬಡಿದುಕೊಳ್ಳುವ ಮಾಧ್ಯಮಗಳು ಸ್ವತಃ ತಮ್ಮ ಸಹವರ್ತಿ ಸಂಸ್ಥೆಯ ಮೇಲಿನ ದಾಳಿಯ ಬಗ್ಗೆ ಬ್ರೇಕಿಂಗ್ ಮಾಡದಿದ್ದುದು ವೃತ್ತಿ ಮಾತ್ಸರ್ಯವೇ ಅಥವಾ ಇನ್ನೇನಾದರೂ ಇದೆಯೇ…
.ರಾಜಕೀಯ ದುಷ್ಟರ ಕೊನೆಯ ನಿಲ್ದಾಣ ಎಂಬ ಪಾಶ್ಚಾತ್ಯ ಚಿಂತಕನ ಮಾತು ಸುಳ್ಳಾಗಲಿ, ರಾಜಕೀಯ ಒಳ್ಳೆಯ ಸುಶಿಕ್ಷಿತರ ಮೊದಲ ಆಯ್ಕೆಯಾಗಿರಲಿ, ರಾಜಕೀಯ ಹಣ ಮಾಡುವ ಅಧಿಕಾರ ಹಿಡಿಯುವ ದಂಧೆಯಲ್ಲ, ಅದೊಂದು ದೊಡ್ಡ ತ್ಯಾಗ ಬಯಸುವ ಸಮಾಜ ಸೇವೆ ಎಂದು ಎಲ್ಲರಿಗೂ ಅರ್ಥವಾಗಲಿ ಎಂಬ ಬಯಕೆಯೊಂದಿಗೆ…….