ಬೆಳಗಾವಿಯಿಂದ ಕಿತ್ತೂರು ಮಾರ್ಗವಾಗಿ ಧಾರವಾಡ ಹೊಸ ರೈಲ್ವೆ ಲೈನ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 927.40 ಕೋಟಿ ಅನುದಾನ ಬಿಡುಗಡೆಗೊಳಿಸಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಮಂತ್ರಿ ಸುರೇಶ ಅಂಗಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸೋಮವಾರ ಕೇಂದ್ರ ರೈಲ್ವೆ ಇಲಾಖೆ ಅಂತಿಮ ಮುದ್ರೆ ಒತ್ತಿ, 927.40 ಕೋಟಿ ಅನುದಾನವನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ.ಬೆಳಗಾವಿ-ದೇಸೂರ-ಕನವಿಕರವಿನಕೊಪ್ಪ-ಬಾಗೇವಾಡಿ-ಎಂಕೆ ಹುಬ್ಬಳ್ಳಿ-ಹೂಲಿಕಟ್ಟಿ-ಕಿತ್ತೂರ-ತೇಗೂರ-ಮಮ್ಮಿಗಟ್ಟಿ-ಕ್ಯಾರಕೊಪ್ಪ ಮಾರ್ಗವಾಗಿ ಧಾರವಾಡ ರೈಲು ತಲುಪಲಿದೆ. ಇನ್ನು 1 ಗಂಟೆ 15 ನಿಮಿಷದಲ್ಲಿ ಬೆಳಗಾವಿಯಿಂದ ಹುಬ್ಬಳ್ಳಿ-ಧಾರವಾಡ ತಲುಪಬಹುದಾಗಿದೆ ಎಂದು ಸುರೇಶ ಅಂಗಡಿ ಹೇಳಿದರು.
ಕಿತ್ತೂರು ಮಾರ್ಗವಾಗಿ ಬೆಳಗಾವಿಯಿಂದ ಧಾರವಾಡಕ್ಕೆ ರೈಲ್ವೆ ಮಾರ್ಗ ಸ್ಥಾಪಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಸಂಸದ ಸುರೇಶ ಅಂಗಡಿ ಅವರೇ ಕೇಂದ್ರ ರೈಲ್ವೆ ಇಲಾಖೆಯಲ್ಲಿ ರಾಜ್ಯ ಸಚಿವರಾಗಿ ಆಯ್ಕೆಯಾದ ನಂತರ ಈ ಬೇಡಿಕೆಗೆ ಮತ್ತಷ್ಟು ಶಕ್ತಿ ಬಂದಿತ್ತು. ಅದು ಈಗ ಈಡೇರಿದಂತಾಗಿದೆ.
ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು ಯೋಜನೆ ವಿವರಿಸಿದರು.