ಬೆಳಗಾವಿ: ಗ್ರಾಮ ಪಂಚಾಯತಿಗಳಲ್ಲಿ ಸರ್ಕಾರದ ಕಾರ್ಯಕ್ರಮಗಳ ಕುರಿತಂತೆ ಜಾಗೃತಿ ಮೂಡಿಸಲು 2017-18 ನೇ ಸಾಲಿನಲ್ಲಿ, ಬೆಳಗಾವಿ ಜಿಲ್ಲೆಯ 344 ಗ್ರಾ.ಪಂ.ಗಳು ಪ್ರೊಜೆಕ್ಟರ್ ಗಳನ್ನು ಖರೀದಿಸಿದ್ದು, ಅವುಗಳಲ್ಲಿ 180 ಪಂಚಾಯತಿಗಳು ಭಾರೀ ಪ್ರಮಾಣದ ಭ್ರಷ್ಟಾಚಾರ ಎಸಗಿರುವುದು ಸಾಬೀತಾಗಿದೆ. ಆದರೆ, ಅಕ್ರಮ ಬಯಲಿಗೆ ಬಂದು ವರ್ಷ ಕಳೆದರೂ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಜಿಲ್ಲೆಯ ರಾಯಬಾಗ, ಅಥಣಿ, ಹುಕ್ಕೇರಿ, ಗೋಕಾಕ ಮತ್ತು ಸವದತ್ತಿ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ. ಪ್ರೊಜೆಕ್ಟರ್ ಗಳನ್ನು ನಾಲ್ಕೈದು ಪಟ್ಟು ಹೆಚ್ಚು ಹಣ ನೀಡಿ ಖರೀದಿಸಲಾಗಿದೆ. ಕೇವಲ ರೂ.4 ಸಾವಿರ ಮೌಲ್ಯದ ಪ್ರೊಜೆಕ್ಟರ್ ಗೆ ಸುಮಾರು ರೂ.25,000 ಕೊಟ್ಟು ಖರೀದಿ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ವಿಶೇಷವಾಗಿ ಗೋಕಾಕ ತಾಲೂಕಿನ 56 ಪಂಚಾಯತಿಗಳು ಗುಣಮಟ್ಟದ ಪ್ರೊಜೆಕ್ಟರ್ ಗಳನ್ನು ರೂ.20 ಸಾವಿರ ಕೊಟ್ಟು ಖರೀದಿಸಿದ್ದು, ಆದರೆ ಅದಕ್ಕೆ ರೂ.64,897 ಪಾವತಿಸುವ ಮೂಲಕ ಭಾರೀ ಅಕ್ರಮ ಎಸಗಿವೆ.
ರಾಯಬಾಗದ 24, ಅಥಣಿಯ 55, ಹುಕ್ಕೇರಿಯ 5, ಗೋಕಾಕಿನ 56 ಮತ್ತು ಸವದತ್ತಿ ತಾಲೂಕಿನ 40 ಗ್ರಾ.ಪಂ.ಗಳಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಜಿ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನೇಮಿಸಿದ್ದ ಇಬ್ಬರು ಸದಸ್ಯರ ತನಿಖಾ ತಂಡ ಕಳೆದ ವರ್ಷವೇ ಪತ್ತೆ ಹಚ್ಚಿದೆ.
ಗ್ರಾಮ ಪಂಚಾಯತಿಗಳಲ್ಲಿ ನಡೆದಿರುವ ಅಕ್ರಮದ ಕುರಿತು ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಅವರು ಜಿ.ಪಂ.ಸಿಇಓ ಅವರಿಗೆ ಕಳೆದ ವರ್ಷದ ಸಪ್ಟೆಂಬರ್ ತಿಂಗಳಲ್ಲಿ ದೂರು ಸಲ್ಲಿಸಿದ್ದರು. ದೂರು ನೀಡಿದ ಹತ್ತೇ ದಿನಗಳಲ್ಲಿ ಸಿಇಓ ರಾಜೇಂದ್ರ ಕೆ.ವಿ.ಅವರು ಪ್ರಕರಣದ ತನಿಖೆಗೆ ಆದೇಶಿಸಿದ್ದರು. ತಿಂಗಳ ಬಳಿಕ ಬಂದ ತನಿಖಾ ವರದಿಯ ಪ್ರಕಾರ ಅಕ್ರಮ ನಡೆದಿರುವುದು ಸ್ಪಷ್ಟವಾಗಿ ಕಂಡು ಬಂದಿದೆ.
ಜಿ.ಪಂ.ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಅವರು ಸುರೇಂದ್ರ ಉಗಾರೆ ಅವರಿಗೆ ನೀಡಿದ ಮಾಹಿತಿಯ ಪ್ರಕಾರ, ಬಹುತೇಕ ಗ್ರಾ.ಪಂ.ಗಳು ಕಳಪೆ ದರ್ಜೆಯ ಪ್ರೊಜೆಕ್ಟರ್ ಗಳನ್ನು ದುಬಾರಿ ಹಣ ನೀಡಿ ಖರೀದಿಸಿರುವುದನ್ನ ಒಪ್ಪಿಕೊಂಡಿದ್ದಾರೆ. ವಿಶೇಷವಾಗಿ ರಾಯಬಾಗ, ಅಥಣಿ, ಸವದತ್ತಿ ಮತ್ತು ಗೋಕಾಕ ತಾಲೂಕುಗಳಲ್ಲಿ ದುಬಾರಿ ಹಣ ನೀಡಿ ಕಳಪೆ ದರ್ಜೆಯ ಪ್ರೊಜೆಕ್ಟರ್ ಖರೀದಿಸಲಾಗಿದೆ. ಕೆಲವು ತಾಲೂಕುಗಳಲ್ಲಿ ಗ್ರಾ.ಪಂ.ಗಳು ನೇರವಾಗಿ ಬೆಂಗಳೂರಿನ ಮಾರಾಟಗಾರರಿಂದ ಪ್ರೊಜೆಕ್ಟರ್ ಖರೀದಿಸಿದ್ದು, ಮಾರಾಟಗಾರರ ವಿಳಾಸ ಅಥವಾ ಸಂಪರ್ಕದ ನಂಬರ್ ಪಂಚಾಯತಿಗಳ ಬಳಿ ಇಲ್ಲ ಎಂದು ಜಿ.ಪಂ.ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಉಗಾರೆ ಅವರಿಗೆ ಮಾಹಿತಿ ನೀಡಿದ್ದಾರೆ.
ತನಿಖಾ ವರದಿಯ ಬಳಿಕ ಸಂಬಂಧಪಟ್ಟ ಎಲ್ಲ ಪಂಚಾಯತಿಗಳಿಗೂ ಕಾರಣ ಕೇಳಿ ನೊಟೀಸ್ ನೀಡಲಾಗಿದೆಯಾದರೂ, ಇದುವರೆಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಹಿರಿಯ ಅಧಿಕಾರಿಗಳು ನಡೆದಿರುವ ಭ್ರಷ್ಟಾಚಾರದ ಕುರಿತಂತೆ ಮೌನ ವಹಿಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದ್ದು, ಭ್ರಷ್ಟಾಚಾರದ ಮೇಲೆಯೇ ಭ್ರಷ್ಟಾಚಾರ ನಡೆಸಿ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ಆರೋಪಿಸಿದ್ದಾರೆ. ಯಾವುದೇ ಕಾರಣಕ್ಕೂ ಪ್ರಕರಣವು ತಾರ್ಕಿಕ ಅಂತ್ಯ ಕಾಣುವ ವರೆಗೆ ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.