ಬೆಂಗಳೂರು :ಕೊರೊನಾದ ಹೊಸ ರೂಪದ ವೈರಸ್ ಹರಡುತ್ತಿರುವ ಕಾರಣ ರಾಜ್ಯದಲ್ಲಿ ಬುಧವಾರದಿಂದ ಜನವರಿ 2 ರವರೆಗೆ ’ರಾತ್ರಿ ಕರ್ಫ್ಯೂ’ ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಕೊರೊನಾ ನಿಯಂತ್ರಣ ಕಾರ್ಯಪಡೆ, ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜತೆ ಸಭೆ ನಡೆಸಿದ ಮುಖ್ಯಮಂತ್ರಿ, “ಈ ಆದೇಶವು ಇಡೀ ರಾಜ್ಯಕ್ಕೆ ಅನ್ವಯವಾಗಲಿದ್ದು, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬುಧವಾರ ರಾತ್ರಿಯಿಂದಲೇ ಈ ಕ್ರಮ ಜಾರಿಗೆ ಬರಲಿದೆ” ಎಂದು ತಿಳಿಸಿದ್ದಾರೆ.
ವಿದೇಶಗಳಿಂದ ರಾಜ್ಯಕ್ಕೆ ಬರುವವರು ಆರ್ಟಿ-ಪಿಸಿಆರ್ ವಿಧಾನದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡು, ನೆಗೆಟಿವ್ ವರದಿ ಹೊಂದಿರಬೇಕು. ಹೊರಗೆ ಓಡಾಡುವಾಗ 72 ಗಂಟೆಗಳ ಅವಧಿಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ ಎಂದಿದ್ದಾರೆ.
ಕೊರೋನಾ ಹೊಸ ಪ್ರಬೇಧ ಹಾಗೂ ಎರಡನೇ ಅಲೆ ಆತಂಕ ಹಿನ್ನೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ರಾತ್ರಿ ಕಫ್ರ್ಯೂ ಜಾರಿಯಾಗಿದೆ. ಕೋವಿಡ್ ಟೆಕ್ನಿಕಲ್ ಟೀಂನ ಸಲಹೆಯಂತೆ ಕಫ್ರ್ಯೂ ಜಾರಿಯಲ್ಲಿದ್ದು, ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಂದ್ ಆಗಲಿವೆ ಎಂದು ಪ್ರಕಟಿಸಿದರು.