*ನಾನು ಕಂಡ ಮಲೆನಾಡಿನ ದೀಪಾವಳಿ* *ಸಮಸ್ತ ನಾಡಿನ ಜನತೆಗೆ ಬೆಳಗಾವಿ ಟೈಮ್ಸ ಪತ್ರಿಕೆ ಹಾಗು ಬೆಳಗಾವಿ ಟೈಮ್ಸ ವೇಬ ಇಂದ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು*

Share The News

*ನಾನು ಕಂಡ ಮಲೆನಾಡ ದೀಪಾವಳಿ*
ಮಲೆನಾಡು ಹಬ್ಬಗಳ ವಿಶೇಷ ತವರು. ಇಲ್ಲಿ ಹಬ್ಬಕ್ಕೊಂದು ಸಂಭ್ರಮ ಸಡಗರ. ಇಲ್ಲಿನ ಆಚರಣೆಗಳೆ ವಿಭಿನ್ನ. ಐದು ದಿನಗಳ ಕಾಲ ನಡೆಯುವ ಈ ದೀಪಾವಳಿ ಮಲೆನಾಡಿನ ಮತ್ತೊಂದು ಸಗ್ಗದ ಸಿರಿ.ನಾನು ಸುಮಾರು ಎಂಟು ವರ್ಷಗಳ ಕಾಲ ನಾನು ಕಂಡು ಅನುಭವಿಸಿದ ದೀಪಾವಳಿ ನಿಮಗಾಗಿ.

ನರಕ ಚತುರ್ದಶಿಯ ದಿನ ಬೆಳಿಗ್ಗೆ ಅಭ್ಯಂಗ ಸ್ನಾನವನ್ನು ಮಾಡಿ, ನಂತರ ಕೆಮ್ಮಣ್ಣು ಮತ್ತು ಸುಣ್ಣವನ್ನು ನೀರಿನಲ್ಲಿ ಬೇರೆ ಬೇರೆಯಾಗಿ ಬೆರೆಸಿ, ಅದನ್ನು ಒಂದು ವೃತ್ತಾಕಾರದ ಬೌಲ್ನಲ್ಲಿ ಅದ್ದಿ, ಹಸು, ಕರು ಮತ್ತು ಎತ್ತುಗಳ ಮೈಮೇಲೇ ಹಚ್ಚಿ, ಅವುಗಳ ಕೊಡುಗಳಿಗೆ ಎಣ್ಣೆಯನ್ನು ಸವರಿ, ನಂತರ ಹೂವಿನ ಹಾರವನ್ನು ಹಾಕಿ, ಅರತಿ ಎತ್ತಿ, ಸಿಹಿ ಕುಂಬಳಕಾಯಿಯಿಂದ ಮಾಡಿದ ಕಡಬು ಮತ್ತು ಹುಗ್ಗಿಯನ್ನು ಹಸು, ಕರು, ಎತ್ತುಗಳಿಗೆ ತಿನ್ನಿಸಿ ನಂತರ ಅವುಗಳನ್ನು ಮೈಯಲು ಹೊರಗೆ ಬಿಡುತ್ತಿದ್ದೆವು. ದೀಪಾವಳಿಯಲ್ಲಿ ಗೋವುಗಳನ್ನು ಪೂಜೆ ಮಾಡುವುದು ಚಿಕ್ಕಂದಿನ ದಿನಗಳಲ್ಲಿ ತುಂಬಾ ಸಂಭ್ರಮವಾಗಿತ್ತು. ನಂತರ ನಾವುಗಳು ತಿಂಡಿ ತಿಂದು ಪಟಾಕಿ ಸಿಡಿಸುತ್ತಿದ್ದೆವು.

ದೀಪಾವಳಿಯ ಮೊದಲನೆಯ ದಿನವಾದ ನರಕ ಚತುರ್ದಶಿಯ ದಿನ ಮುಂಡುಗ ಹಾಕುವ ಪದ್ದತಿ ಅಲ್ಲಿನ ಸಂಪ್ರದಾಯಗಳಲ್ಲಿ ಒಂದು. ಅದನ್ನು ಮನೆಯ ಬಾಗಿಲಿನಿಂದ ಹಿಡಿದು, ಅರೆಯುವ ಕಲ್ಲಿನವರೆಗೂ ಇಟ್ಟು ಪೂಜಿಸುತ್ತಾರೆ. ಹಾಗೆಯೇ ಅವರವರ ಜಮೀನುಗಳ ಒಂದೊಂದು ಮೂಲೆಯಲ್ಲೂ ಇಡುತ್ತಾರೆ. ಇದನ್ನು ಇಡುವವರು ಆ ಮನೆಯ ಯಜಮಾನ ಮನೆಗೆ ದಿನವೂ ಬರುವ ಕೆಲಸದವರಿಗೆ ಒಪ್ಪಿಸಲಾಗುತ್ತದೆ. ಈ ಮುಂಡುಗವನ್ನು ಇಟ್ಟವರೇ ಬಲಿ ಪಾಡ್ಯಮಿಯ ದಿನದಂದು ಮುಸ್ಸಂಜೆ ಕಾಲದಲ್ಲಿ ಹಾಡನ್ನು ಹೇಳುತ್ತಾ ದೀಪವನ್ನು ಯಜಮಾನ ಮನೆಮುಂದೆ ಮತ್ತು ಅವನ ಜಮೀನಿನ ಪ್ರತಿಯೊಂದು ಮೂಲಗೂ ಹಚ್ಚಬೇಕು. ಅವನು ಬಂದು ದೀಪ ಹಚ್ಚಿದ ನಂತರ ಯಜಮಾನನ ಮನೆಯಲ್ಲಿ ದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುವುದು. ಅದರ ಅರ್ಥ ಬಲಿಯೂ ಆ ಸಮಯದಲ್ಲಿ ಬರುತ್ತಾನೆಂದು ನಂಬಿಕೆ. ಮನೆಯ ಎಲ್ಲಾ ಕಡೆಗಳಲ್ಲೂ ಬೆತ್ತದಿಂದ ಮಾಡಿದ ದೀಪವನ್ನು ಮನೆಕೆಲಸದವನು ಹಚ್ಚಿದ ಹೋದ ಮೇಲೆ ಮನೆಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ದೀಪ ಹಚ್ಚಿದವನಿಗೆ ಹಣ, ಹೊಸ ಬಟ್ಟೆ, ಸಿಹಿ ತಿಂಡಿಗಳನ್ನು ನೀಡುತ್ತಾರೆ.

ಮಲೆನಾಡಿನ ದೀಪಾವಳಿಯಲ್ಲಿ ಅಲ್ಲಿನ ಜನರು ವರ್ಷಗಟ್ಟಲೆ ಉಪಯೋಗಿಸುವ ನೇಗಿಲು, ಬಿಸು ಕಲ್ಲು, ಅಕ್ಕಿ ಕೇರುವ ಮರ, ಪಣತ(ಭತ್ತವನ್ನು ವರ್ಷವಿಡಿ ಸಂಗ್ರಹಿಸಿಡು ಮರದ ವಸ್ತು). ಹಸುಗಳು ತಮ್ಮ ಜಮೀನು ಎಲ್ಲದಕ್ಕೂ ಐದು ದಿನಗಳ ಪೂಜೆ ಸಲ್ಲಿಸಲಾಗುತ್ತದೆ. ಹಾಗೆಯೇ ದಿನ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ ವಿಶೇಷ ಸ್ಥಾನ ಕೊಟ್ಟು ಗೌರವ ಸೂಚಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ಅಂಟಿಗೆ-ಪಿಂಟಿಗೆಯವರು ಮನೆ ಮನೆಗೆ ಬರುವುದಿದೆ. ಅವರು ದೀಪವನ್ನು ಕೈಯಲ್ಲಿ ಹಿಡಿದು ಹಾಡನ್ನು ಹೇಳುತ್ತಾ ಆ ಮನೆಗೆ ಶುಭವಾಗಲಿಯೆಂದು ಹಾರೈಸುತ್ತಾರೆ. ಕರಡಿ ಕುಣಿತ, ಹುಲಿ ಕುಣಿತದ ವೇಷವನ್ನು ಹಾಕಿಕೊಂಡು ಬಂದು, ಕುಣಿದು ಮನೆಯಲ್ಲಿದ್ದ ಜನರಿಗೆ ಉಲ್ಲಾಸ ನೀಡುವುದಿದೆ.

ಹಬ್ಬದ ದಿನಗಳಲ್ಲಿ ವಿಶೇಷವಾಗಿ ಒಬ್ಬಟ್ಟಿನ ಊಟವನ್ನು ಮನೆಮಂದಿಯಲ್ಲ ತಯಾರಿಸಿ ಸವಿಯುವುದಿದೆ. ಆ ಮನೆಯಲ್ಲಿ ಹೊಸದಾಗಿ ಹೆಣ್ಣು ಮಗಳಿಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ್ದರೆ, ಮಗಳು ಮತ್ತು ಅಳಿಯನನ್ನು ಹಬ್ಬಕ್ಕೆ ಕರೆದು, ಆರತಿ ಮಾಡಿ, ತಮ್ಮ ಶಕ್ತಿಗನುಸಾರವಾಗಿ ಮಗಳು ಮತ್ತು ಅಳಿಯನಿಗೆ ಉಡುಗೊರೆಯನ್ನು ನೀಡುವ ಸಂಪ್ರದಾಯವಿದೆ. ಆಗ ಇಡೀ ಕುಟುಂಬದ ಬಂಧುಬಳಗ ಅವರ ಮನೆಗೆ ಬಂದು ಹೊಸದಾಗಿ ಮದುವೆಯಾದ ದಂಪತಿಗಳಿಗೆ ಆರ್ಶಿರ್ವಾದವನ್ನು ಮಾಡುವುದಿದೆ.

ಐದನೇಯ ದಿನ ಮತ್ತು ದೀಪಾವಳಿಯ ಕೊನೆಯ ದಿನ ಹೊಸತೊಡಕುನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆ ದಿನ ಜಮೀನಿನಲ್ಲಿ ಬೆಳೆದ ಪಸಲುಗಳು ಪೈರಿಗೆ ಬಂದು ನಿಂತಿರುತ್ತದೆ. ಭತ್ತ, ಅಡಿಕೆಯನ್ನು ಪೂಜೆ ಮಾಡಲಾಗುತ್ತದೆ. ಹೊಸತೊಡಕಿನ ದಿನ ಸಿಹಿ ತಿಂಡಿಗಳನ್ನು ತಯಾರಿಸಿ ಸವಿಯುತ್ತಾರೆ. ದೀಪಾವಳಿಯೆಂದರೆ ಮಲೆನಾಡಿನ ಜನರಿಗೆ ದೊಡ್ಡ ಹಬ್ಬವೇ ಹೌದು. ಇಂದಿನ ಪೀಳಿಗೆಯವರು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಇಂತಹ ಹಬ್ಬವನ್ನು ಮುಂದುವರಿಸಿಕೊಂಡು ಹೋದರೆ ಅವರ ಮಕ್ಕಳಿಗೂ ಹಬ್ಬದ ಆಚರಣೆಯು ತಿಳಿದಂತಾಗುತ್ತದೆ. ದೀಪಾವಳಿ ಹಬ್ಬವು ಬರೀ ಹಬ್ಬವಾಗಿರದೆ, ಪ್ರತಿಯಾಂದು ವಸ್ತುಗಳಿಗೂ ಗೌರವ ಸೂಚಿಸುವ ಹಬ್ಬವೆಂದರೆ ತಪ್ಪಾಗಲಾರದು,
*ಶ್ರೀ ಇಂಗಳಗಿ ದಾವಲಮಲೀಕ*


Share The News

Leave a Reply

Your email address will not be published. Required fields are marked *

error: Content is protected !!