ಗೋಕಾಕ: ಮೇ ತಿಂಗಳಲ್ಲಿ ಗೋಕಾಕಿನ ಆದಿಜಾಂಬವ ನಗರದಲ್ಲಿ ನಡೆದ ದಲಿತ ಮುಖಂಡ ಸಿದ್ದಪ್ಪ ಅರ್ಜುನ ಕನಮಡ್ಡಿ ಕೊಲೆ ಪ್ರಕರಣದಲ್ಲಿ ಪೊಲೀಸರು ಟೈಗರ್ ಗ್ಯಾಂಗಿನ 9 ಮಂದಿಯನ್ನು ಬಂಧಿಸಿದ್ದು, ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡಿದ್ದರಲ್ಲಿ ರೂ.30.48 ಲಕ್ಷ ನಗದು, 1 ಪಿಸ್ತೂಲ್, 20 ಜೀವಂತ ಗುಂಡುಗಳು, 4 ತಳವಾರಗಳು, 3 ಜಂಬೆ, 22 ಸಿಮ್ ಕಾರ್ಡ್ ಸೇರಿದಂತೆ ಅನೇಕ ದಾಖಲೆಗಳು ಸೇರಿವೆ.
ಗೋಕಾಕಿನ ಡಿವೈಎಸ್ಪಿ ಕಚೇರಿಯಲ್ಲಿ ಈ ಕುರಿತಂತೆ ಇಂದು ವಿವರಣೆ ನೀಡಿದ ಎಸ್ಪಿ ಲಕ್ಷ್ಮಣ ನಿಂಬರಗಿ, ಆರೋಪಿಗಳು 2006 ರಲ್ಲಿ ಸಕ್ರಿಯವಾಗಿದ್ದ ಟೈಗರ್ ಗ್ಯಾಂಗ್ ಎನ್ನುವ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡು, ವ್ಯವಸ್ಥಿತವಾಗಿ ಸಂಚು ರೂಪಿಸಿ ಅಪರಾಧಗಳನ್ನು ಎಸಗುತ್ತಿರುವುದು ಮತ್ತು ಯುವಕರ ಮೇಲೆ ಪ್ರಭಾವ ಬೀರಿ ತಮ್ಮ ಸಂಘಟನೆಯ ಅಪರಾಧಿಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡು ಬಂದಿದೆ ಎಂದು ತಿಳಿಸಿದರು. ಆರೋಪಿತರು ಸಾರ್ವಜನಿಕರಲ್ಲಿ ಭಯ ಉಂಟು ಮಾಡುವುದು, ಸಾಕ್ಷಿದಾರರನ್ನು ಹೆದರಿಸುವುದು ಹಾಗೂ ಪುರಾವೆಗಳನ್ನು ನಾಶಪಡಿಸುವಲ್ಲಿ ನಿಸ್ಸೀಮರಾಗಿರುತ್ತಾರೆ. ಹಾಗಾಗಿ ಆರೋಪಿಗಳ ಮೇಲೆ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ 2000 ಕಲಂ 3 ಮತ್ತು 4 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ನಿಂಬರಗಿ ಹೇಳಿದರು.
ಗಂಗಾಧರ ಸಂತ್ರಾಮ ಶಿಂಧೆ (26), ವಿನಾಯಕ ಬಸವರಾಜ ಹಡಗಿನಾಳ (22), ವಿಠ್ಠಲ ಪರಶುರಾಮ ಪವಾರ (23), ವಿನೋದ ಚಂದ್ರು ಹೊಸಮನಿ (22), ಕಿರಣ ವಿಜಯ ದೊಡ್ಡಣ್ಣವರ (22), ರವಿ ಭೀಮಶಿ ಚೂನನ್ನವರ (22), ಕೇದಾರಿ ಬಸವಣ್ಣಿ ಜಾಧವ (36), ಸುನಿಲ ಮಲ್ಲಿಕಾರ್ಜುನ ಮುರಕಿಭಾವಿ (43) ಮತ್ತು ಸಂತೋಷ ಪಾಂಡುರಂಗ ಚಿಗಡೊಳ್ಳಿ (21). ಎಲ್ಲರೂ ಗೋಕಾಕ ನಗರದವರು.