ಪುನೀತ್ ನಿಧನ ಸುದ್ದಿ ಕೇಳುತ್ತಿದಂತೆ ಸಾವನ್ನಪ್ಪಿದ ಅಭಿಮಾನಿ..!

Share The News

ಹನೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನ ಸುದ್ದಿ ತಿಳಿದು ಆಘಾತಗೊಂಡ ಅಭಿಮಾನಿಯೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮರೂರು ಗ್ರಾಮದ ಮುನಿಯಪ್ಪ(30) ಮೃತರು. ಶುಕ್ರವಾರ ಬೆಳಗ್ಗೆ ಪುನೀತ್​ ರಾಜ್​ಕುಮಾರ್​ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮುನಿಯಪ್ಪ ಆಘಾತಗೊಂಡಿದ್ದರು

ಅಪ್ಪು ಆರೋಗ್ಯ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಮುನಿಯಪ್ಪ ಕಣ್ಣೀರು ಹಾಕುತ್ತಾ ಕುಸಿದರು. ಅತ್ತ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಬರುತ್ತಿದ್ದಂತೆ ಮುನಿಯಪ್ಪಗೆ ಎದೆನೋವು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣದಲ್ಲಿ ಪ್ರಾಣಪಕ್ಷಿ ಹಾರಿಹೋಗಿದೆ. 7 ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಮುನಿಯಪ್ಪ, ಕರೊನಾ ಹಿನ್ನೆಲೆ ಮರೂರು ಗ್ರಾಮದಲ್ಲಿ ವಾಸವಿದ್ದ.

ಪುನೀತ್ ಅವರ ಪ್ರತಿಯೊಂದು ಸಿನಿಮಾವನ್ನು ತಪ್ಪದೇ ನೋಡುತ್ತಿದ್ದ ಮುನಿಯಪ್ಪ, ಆಗಾಗ್ಗೆ ಬೆಂಗಳೂರಿಗೆ ತೆರಳಿ ನೆಚ್ಚಿನ ನಟನನ್ನು ಭೇಟಿಯಾಗುತ್ತಿದ್ದರು. ಮುನಿಯಪ್ಪ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ‘ಅರಸ’ನಂತೆ ಮೆರೆದಿದ್ದ ‘ಯುವರತ್ನ’ ಕಿರಿಯ ವಯಸ್ಸಲ್ಲೇ ಬಾರದೂರಿಗೆ ಪಯಣ ಬೆಳೆಸಿರುವ ಸುದ್ದಿಯನ್ನ ಅರಗಿಸಿಕೊಳ್ಳಲಾಗುತ್ತಿಲ್ಲ. ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿದೆ


Share The News

Leave a Reply

Your email address will not be published. Required fields are marked *

error: Content is protected !!