*ಸರ್ಕಾರದ ಖಜಾನೆಗೆ ಗುಂಡಿ ತೋಡೇಬಿಟ್ರಾ? ಗುಂಡೂರಾವ್,ಸಂಬರಗಿ ಗ್ರಾಂಪಂ ಅಭಿವೃದ್ಧಿ ಅಧಿಕಾರಿಗಳ ಅಂಧಾ ದರ್ಬಾರ್ ಗೆ ಬ್ರೇಕ್ ಹಾಕೋರಾರು,*

Share The News

ಬೆಳಗಾವಿ :- ಮೇಲಧಿಕಾರಿಗಳ ಅನುಮತಿ ಪಡೆಯದೆ ಎಸ್ಟ್ರೋ ಖಾತೆಯ ಹಣ ದುಂದುವೆಚ್ಚ ಮಾಡಿರುವ ಆರೋಪ ಕೇಳಿಬಂದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸಂಬರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗುಂಡೂರಾವ್ ಮಿರಜಕರ್ ಹಾಗೂ ಅಧ್ಯಕ್ಷರ ವಿರುದ್ಧ ಹಣ ದುರುಪಯೋಗದ ಆರೋಪವನ್ನು ಸಂಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಾಗನೂರು ಗ್ರಾಮದ ಕುಮಾರ್ ಕಾಂಬಳೆ ಎಂಬುವವರು ಆರೋಪ ಮಾಡಿದ್ದಲ್ಲದೆ ‌ಮೇಲಧಿಕಾರಿಗಳಿಗೆ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯತಿ ಎದುರು ಪ್ರತಿಭಟಿಸುವ ಮೂಲಕ ಅಕ್ರಮವೆಸಗಿರುವ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸೂಕ್ತವಾದ ಪೂರಕ ದಾಖಲೆ ಬಿಡುಗಡೆ ಮಾಡಿದರು.

ಕುಡಿಯುವ ನೀರಿನ ಸ್ಥಾವರಗಳ ಹಾಗೂ ಬೀದಿ ದೀಪದ ವಿದ್ಯುತ್ ಬಿಲ್ ಭರಣಾ ಮಾಡಲು ಗ್ರಾಮ ಪಂಚಾಯತಿಯ ಎಸ್ಟ್ರೋ ಖಾತೆಗೆ ರಾಜ್ಯ ಸರ್ಕಾರದಿಂದ ಜಮೆಯಾಗುವ ಅನುದಾನವನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಖಾತೆಗೆ ನೇರವಾಗಿ ಒಟ್ಟು 10ಲಕ್ಷ ರೂ ಗಳನ್ನು ವರ್ಗಾವಣೆ ಮಾಡಿ ಜಂಟಿಯಾಗಿ ದುಂದು ವೆಚ್ಚ ಮಾಡಿರುತ್ತಾರೆ ಅಲ್ಲದೆ ಹೀಗೆ ಖರ್ಚು ಮಾಡಿದ ಅನುದಾನದಲ್ಲಿ ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಅಥವಾ ಆಸ್ತಿ ನಿರ್ಮಾಣದಂತಹ ಕಾಮಗಾರಿಗಳನ್ನು ಕೈಗೊಂಡಿರುವುದಿಲ್ಲ ಹಾಗೂ ಖರ್ಚಾದ ಅನುದಾನಕ್ಕೆ ಸರ್ಕಾರ ಹೊರಡಿಸಿರುವ ಆದೇಶದಲ್ಲಿನ ಮಾರ್ಗ ಸೂಚಿಗಳಂತೆ ಸೂಕ್ತ ರೀತಿಯ ಕ್ರೀಯಾ ಯೋಜನೆ ತಯಾರಿಸಿ ಸಂಬಂಧಪಟ್ಟ ಮೇಲಾಧಿಕಾರಿಗಳ ಅನುಮೋದನೆ ಪಡೆಯದೇ ಕಾನೂನುಗಳನ್ನು ಗಾಳಿಗೆ ತೂರಿ ನಿಯಮ ಬಾಹಿರವಾಗಿ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುತ್ತಾರೆ.

ಒಟ್ಟು 9,99952.80ರೂಗಳ ಖರ್ಚು ಮಾಡಿರುವುದು ಕಂಡುಬಂದಿದೆ ಇದರಿಂದಾಗಿ ಸಾರ್ವಜನಿಕ ಕೆಲಸಗಳು ಅನುಷ್ಠಾನಕ್ಕೆ ಬಾರದೆ ಅಭಿವೃದ್ಧಿ ಕಾರ್ಯಗಳೇ ಮರೀಚಿಕೆಯಾಗಿವೆ ಸರ್ಕಾರಿ ನೌಕರರಾಗಿ, ಜನಪ್ರತಿನಿಧಿಗಳಾಗಿ ಇವರಿರ್ವರು ಜವಾಬ್ದಾರಿ ಮರೆತು ಜನರ ಕಷ್ಟಗಳಿಗೆ ಸ್ಪಂದನೆ ನೀಡದೆ ನಿಗದಿಪಡಿಸಿದ ಕರ್ತವ್ಯಗಳನ್ನು ಮಣ್ಣುಪಾಲು ಮಾಡಿ ಸರ್ಕಾರದ ಹಣ ದುಂದುವೆಚ್ಚ ಮಾಡುವ ಮೂಲಕ ಅಂಧಾ ದರ್ಬಾರ್ ನಡೆಸುತ್ತಿದ್ದಾರೆ.

ಇನ್ನೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಎಮ್ ಎನ್ ಆರ್ ಜಿ ಯೋಜನೆಯಲ್ಲಿಯೂ ಸಹ ತಮ್ಮ ಕಳ್ಳ ಬುದ್ಧಿ ತೋರಿಸಿರುವ ಇವರು ಕಳೆದ ವರ್ಷ ಆಗಿರುವ ಕಾಮಗಾರಿಗಳ ಕ್ರಿಯಾ ಯೋಜನೆ ಈಗ ಪುನಃ ರೂಪಿಸಿ ಕೆಲಸ ಮಾಡದೆ ಸರ್ಕಾರಕ್ಕೆ ಮಕ್ಮಲ್ ಟೋಪಿ ಹಾಕಿ ಸುಮಾರು 15ಲಕ್ಷದವರೆಗೆ ಖರ್ಚು ಹಾಕಿದ್ದಾರೆ ಕೂಲಿಕಾರರಿಂದ ಮಾಡಿಸಬೇಕಾದ ಕೆಲಸಗಳನ್ನು ಯಂತ್ರಗಳಿಂದ ಮಾಡಿಸಿರುತ್ತಾರೆಂದು ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರ ವಿರುದ್ಧ
ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಮೇಲ್ನೋಟಕ್ಕೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿದ್ದಾರೆಂಬುದು ಕಂಡು ಬರುತ್ತಿದೆ ಈ ರೀತಿ ಅಕ್ರಮವೆಸಗಿರುವ ಆರೋಪ ಹೊತ್ತಿರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರ ವಿರುದ್ಧ ಸೂಕ್ತವಾಗಿ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಪಿಡಿಓ ಸಾಹೇಬರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಪಂಚಾಯತಿಗೆ ಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿ ಆರೋಪದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬಂತೆ ಸರ್ಕಾರದ ಖಜಾನೆಗೆ ರಕ್ಷಕರಾಗಬೇಕಾಗಿದ್ದ ಗುಂಡೂರಾವ್ ಪಂಚಾಯತಿ ಎಸ್ಟ್ರೋ ಖಾತೆಗೆ ಗುಂಡಿ ತೋಡಿ ಸರ್ಕಾರದ ಹಣಕ್ಕೆ ಕಣ್ಣ ಹಾಕಿದ್ದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸರ್ಕಾರದ ಹಣವನ್ನು ಲೂಟಿ ಮಾಡಿರುವ ತಪ್ಪಿತಸ್ಥ ಅಧಿಕಾರಿ ಗುಂಡೂರಾವ್, ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಂಡು ಜನರಿಗೆ ಒಳ್ಳೆಯ ಸಂದೇಶ ನೀಡುತ್ತಾ ಕಾದು ನೋಡಬೇಕು.


Share The News

Leave a Reply

Your email address will not be published. Required fields are marked *

error: Content is protected !!